ನಿಯೋಬಿಯಮ್
	ಆವರ್ತಕೋಷ್ಟಕದಲ್ಲಿ 5ನೆಯ ಗುಂಪಿಗೆ ಸೇರಿರುವ ಸಂಕ್ರಮಣ ಲೋಹ. ಇದರ ಗುಣಗಳು ಟ್ಯಾಂಟಲಮ್ (ಟ್ಯಾಂಟಲಸ್ ಎಂಬ ಗ್ರೀಕ್ ಪುರಾಣ ಪುರುಷನ ಹೆಸರಿನಿಂದ ರೂಪಿತವಾದದ್ದು) ಎಂಬ ಲೋಹದ ಗುಣಗಳೊಂದಿಗೆ ಬಹಳವಾಗಿ ಹೋಲುವುದರಿಂದ ಜರ್ಮನ್ ರಸಾಯನವಿಜ್ಞಾನಿ ಹೈನ್ರಿಚ್ ರೋಜ್ ಎಂಬಾತ ಇದಕ್ಕೆ, ನಿಯೋಬಿಯಮ್ (ಟ್ಯಾಂಟಲಸನ ಮಗಳಾದ ನಿಯೋಬಳ ಹೆಸರಿನಿಂದ ರೂಪಿತವಾದದ್ದು) ಎಂಬ ಹೆಸರನ್ನು ಕೊಟ್ಟ (1844). ಈ ಲೋಹವನ್ನು ಮೊತ್ತಮೊದಲಿಗೆ ಶೋಧಿಸಿದ ಕೀರ್ತಿ ಹ್ಯಾಚೆಟ್ ಎಂಬ ಬ್ರಿಟಿಷ್ ರಸಾಯನ ವಿಜ್ಞಾನಿಗೆ ಸಲ್ಲುತ್ತದೆ. ನ್ಯೂ ಇಂಗ್ಲೆಂಡಿನಲ್ಲಿ ದೊರೆತ ಒಂದು ಖನಿಜದಿಂದ ಇದನ್ನು ಶೋಧಿಸಿದ್ದರಿಂದ ಹ್ಯಾಚೆಟ್ ಇದಕ್ಕೆ ಕೊಲಂಬಿಯಮ್ ಎಂಬ ಹೆಸರನ್ನು ಇಟ್ಟಿದ್ದ (1801). ನಿಯೋಬಿಯಮ್ಮಿಗೆ ಕೊಲಂಬಿಯಮ್ ಎಂಬ ಹೆಸರನ್ನು ಈಗಲೂ ಒಮ್ಮೊಮ್ಮೆ ಅಮೆರಿಕ ದೇಶದ ಲೋಹೋದ್ಯಮದಲ್ಲಿ ಉಪಯೋಗಿಸುವುದುಂಟು. ಆದರೆ 1949ರಲ್ಲಿ ಸೇರಿದ ಅಂತಾರಾಷ್ಟ್ರೀಯ ರಸಾಯನ ವಿಜ್ಞಾನಿಗಳ ಸಭೆ ನಿಯೋಬಿಯಮ್ ಎಂಬ ಹೆಸರನ್ನೇ ಮಾನ್ಯ ಮಾಡಿದೆ.

	ಸೃಷ್ಟಿಯಲ್ಲಿ ನಿಯೋಬಿಯಮ್ ಸ್ವತಂತ್ರವಾಗಿ ಇರುವುದಿಲ್ಲ. ಹೆಚ್ಚಾಗಿ ಟ್ಯಾಂಟಲಮ್ ಜೊತೆಗೆ ಭಸ್ಮದ ರೂಪದಲ್ಲಿ ಇರುತ್ತದೆ. ಕೊಲಂಬೈಟ್, ಟ್ಯಾಂಟ ಕೊಲಂಬೈಟ್ ಮತ್ತು ಪೈರೊಕ್ಲೋರ್ ಇವು ಈ ಲೋಹದ ತಯಾರಿಕೆಗೆ ಬೇಕಾಗುವ ಮುಖ್ಯ ಖನಿಜಗಳು. ಈ ಖನಿಜಗಳು ಸಾಮಾನ್ಯವಾಗಿ ಬ್ರಜಿóಲ್, ಕೆನಡ, ನಾರ್ವೇ, ಆಸ್ಟ್ರೇಲಿಯ ದೇಶಗಳಲ್ಲಿ ಸಿಗುತ್ತವೆ. ಮೊದಲು ಈ ಖನಿಜಗಳಿಂದ ಟ್ಯಾಂಟಲಮ್ ಮತ್ತು ನಿಯೋಬಿಯಮ್ ಭಸ್ಮಗಳನ್ನು ಬೇರ್ಪಡಿಸಿ ಬಳಿಕ ಈ ಮಿಶ್ರಣದಿಂದ, ಹೈಡ್ರೊಫ್ಲೂರಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲ ಮತ್ತು ಮೀಥೈಲ್ ಐಸೊ ಬ್ಯೂಟೈಲ್‍ಕೀಟೋನ್ ಎಂಬ ದ್ರವಗಳನ್ನು ಉಪಯೋಗಿಸಿ ಸಾರೀಕರಣಮಾಡಿ ನಿಯೋಬಿಯಮ್ ಭಸ್ಮವನ್ನು ಬೇರ್ಪಡಿಸಲಾಗುತ್ತದೆ. ಈ ಭಸ್ಮವನ್ನು ಇಂಗಾಲದಿಂದ ಅಪಕರ್ಷಿಸಿ ನಿಯೋಬಿಯಮ್ಮಿನ ಪುಡಿಯನ್ನು ತಯಾರಿಸಲಾಗುತ್ತದೆ. ಇದನ್ನು ಚೂರ್ಣ ಲೋಹ ವಿಜ್ಞಾನ ವಿಧಾನದಿಂದಾಗಲಿ ಎಲೆಕ್ಟ್ರಾನ್ ಕಿರಣವನ್ನು ಉಪಯೋಗಿಸಿ ಕರಗಿಸುವುದರಿಂದಾಗಲಿ ಒಂದುಗೂಡಿಸಿ ಶುದ್ಧ ನಿಯೋಬಿಯಮ್ ಲೋಹವನ್ನು ತಯಾರಿಸುವರು. ನಿಯೋಬಿಯಮ್ ಲೋಹವನ್ನು ಅದರ ಕಾರ್ಬೈಡ್ ಅಥವಾ ಹ್ಯಾಲೈಡುಗಳಿಂದಲೂ ತಯಾರಿಸಬಹುದು.

	ಶುದ್ಧವಾದ ನಿಯೋಬಿಯಮ್ ಲೋಹ ಮೃದು ಮತ್ತು ತನ್ಯಶೀಲ. ನೋಡಲಿಕ್ಕೆ ಉಕ್ಕಿನಂತೆ ಇದ್ದು, ಉಜ್ಜಿದಾಗ ಪ್ಲಾಟಿನಂನಂತೆ ಕಾಣಿಸುತ್ತದೆ. ಇದರ ರಾಸಾಯನಿಕ ಪ್ರತೀಕ Nb. ಪರಮಾಣು ಸಂಖ್ಯೆ 41, ಪರಮಾಣುತೂಕ 92.906 ನೈಸರ್ಗಿಕವಾಗಿ ದೊರಕುವ ಸ್ಥಿರ ಐಸೋಟೋಪ್ 90Nb ಮಾತ್ರ. ಆದರೆ ಇನ್ನೂ 12 ವಿಕಿರಣ ಪಟು ಐಸೊಟೋಪುಗಳನ್ನು (89, 90, 91, 92, 94, 95, 96, 97, 98, 99, 100, 101) ಕೃತಕವಾಗಿ ತಯಾರಿಸಲಾಗಿದೆ. ಇದರ ದ್ರವನ ಬಿಂದು 2468º C. ಕ್ವಥನ ಬಿಂದು 4927º C, ಸಾಂದ್ರತೆ (20º C) 8.57 ಗ್ರಾಮ್/ಸಿಸಿ ವೇಲೆನ್ಸಿ 2, 3, 4, 5 ಎಲೆಕ್ಟ್ರಾನ್ ಜೋಡಣೆ,  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	ನಿಯೋಬಿಯಮ್ ಲೋಹದಿಂದ ಹಿರಿಗಾತ್ರದ ಯಾವ ಉಪಯೋಗವೂ ಇಲ್ಲ. ಆದರೆ, ಇದಕ್ಕೆ ಹೆಚ್ಚಿನ ದ್ರವನ ಬಿಂದು ಹಾಗೂ ಇನ್ನಿತರ ಆಕರ್ಷಕ ಗುಣಗಳು ಇರುವುದರಿಂದ ಅಧಿಕ ಉಷ್ಣತೆಯನ್ನು ಸಹಿಸುವ ಉಪಕರಣಗಳನ್ನು ಮಾಡಲು ಬೇಕಾಗುವ ಮಿಶ್ರ ಲೋಹಗಳ ಹಾಗೂ ತುಕ್ಕು ರಹಿತ ಉಕ್ಕಿನ (ಸ್ಟೇನ್‍ಲೆಸ್ ಸ್ಟೀಲ್) ತಯಾರಿಕೆಯಲ್ಲಿ ಇದರ ಉಪಯೋಗವಿದೆ. ಬಹಳಷ್ಟು ರಾಸಾಯನಿಕ ವಸ್ತುಗಳ ಕೊರೆತ ಕ್ರಿಯೆಗೆ ನಿಯೋಬಿಯಮ್ ಸುಲಭವಾಗಿ ಒಳಗಾಗುವುದಿಲ್ಲವಾದ್ದರಿಂದ ರಾಸಾಯನಿಕ ಉದ್ಯಮಗಳಲ್ಲಿ ಬೇಕಾಗುವ ಕೊರೆತ ನಿರೋಧಕ ಸಲಕರಣೆಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಪರಮಾಣು ಶಕ್ತಿಯನ್ನು ಉತ್ಪಾದಿಸುವ ವಿಶಿಷ್ಟ ಸಲಕರಣೆಗಳಿಗಾಗಿಯೂ ನಿಯೋಬಿಯಮ್ಮನ್ನು ಬಳಸಲಾಗುತ್ತದೆ. ಬಂಧಿತ ಕಾರ್ಬೈಡುಗಳನ್ನು ಹಾಗೂ ನೀರ್ಗಾಲಿಯ ಅಲಗುಗಳನ್ನು ತಯಾರಿಸುವಲ್ಲಿ ನಿಯೋಬಿಯಮ್ ಕಾರ್ಬೈಡ್‍ನ ಬಳಕೆ ಉಂಟು.
(ಎಸ್.ವೈ.ಎ.)